Friday, November 11, 2011

ಭಾವನೆಗಳ ನಾಗಾಲೋಟ...




ಭಾವನೆಗಳ  ನಾಗಾಲೋಟ
ಹುಚ್ಚು  ಕುದುರಯೆಂತೆ ಕೆನೆದಿದೆ
ಛೆ!!! ಇದೇನಿದು ಮನಸ್ಸಿನ ಹುಚ್ಚಾಟ ಹಿಡಿತಕೆ ಸಿಗುತ್ತಿಲ್ಲ..
 ಸುಸ್ತಾದೆ ಯೋಚನಾ ಲಹರಿಯಲಿ ತೇಲಾಡಿ

ಇಬ್ಬಾಗವಾಗಿ ಹೋದೆನು
ಬುದ್ದಿ ಹೇಳುತಿದೆ ಅದ್ಯಾವುದೋ ಸುದ್ದಿ
ಮನಸೇ ನಿನಗೆ ನಾ ಹೇಗೆ ಹೇಳಲಿ ಬುದ್ದಿ
ಸಾಗರದಂಚಲ್ಲಿ ಕಟ್ಟು ಒಂದು ಪ್ರೀತಿಯ ಗುಬ್ಬಿ ಗೂಡು
ಬಂದರೇನಂತೆ ಅಲೆ ಅಬ್ಬರದಿ
ಮತ್ತೆ ಮತ್ತೆ ಕಟ್ಟೋಣ ಬೆಚ್ಚಗಿನ ಗೂಡು
ಹಾಡುತ ನಮ್ಮದೇ ಮನದ ಹಾಡು

ಯಾವ ಹಮ್ಮು ಬಿಮ್ಮಿನ ಚಿಂತೆ ನಮಗೇಕೆ
ಹೃದಯ ಒಡೆದ ಸದ್ದು ಕೂಡ ಕೇಳದಾಗಿದೆ
ನಮ್ಮ ದಾರಿಯಲ್ಲಿ ಅದು ಚೂರು ಚೂರಾಗಿ ಚುಚ್ಚುತಿದ್ದರು
ಮೂಡದಿರಲಿ ಮೊಗದ ಮೇಲೆ ಯಾವುದೇ ನೋವಿನ ನೆರಿಗೆ
ಬೇಡ ಮತ್ತೆ ನಮಗೆಂದು ಯಾವುದೇ ಭಾವುಕತೆಯ ಸುಲಿಗೆ

 ತಂಪು ಗಾಳಿಯು ಕದ್ದೊಯ್ದಿದೆ  ಆ ನನ್ನ ನಿಟ್ಟುಸಿರು
ಬಿಗಿದಪ್ಪಿದೆ ಬೀಸುಗಾಳಿ ಸಾಂತ್ವನ ಹೇಳುತ
ಕೆನ್ನೆಯಿಂದ ಜಾರಿದ ಆ ಕಣ್ಣೀರ ಕೊಂಡೊಯ್ಯಿತು
ಕಾಲ್ತೊಳೆಯಲು ಬಂದ ಅಲೆ ಅಲೆಯು

ಹೊತ್ತು ಕಳೆದರು ಇನ್ನು ಮುಗಿದಿಲ್ಲ
ಭಾವಗಳ ಹುಚ್ಚು ಕುಣಿತ
ಸುಮ್ಮನೆ ಕುಳಿತಿರುವೆ ಮತ್ತೆ ನಾಳೆ ಬಂದೆ ಬರುವೆ
ಇದೆ ಜಾಗ ನನಗಾಗಿ ಕಾದಿರಲಿ
ಸಣ್ಣ ಮೌನ ಗೀತೆ ನನಗಾಗಿ ಅಲೆ ಅಲೆಯಾಗಿ ಮೂಡಿ ಬರಲಿ

                            ***ಸಿರಿ***

Thursday, November 3, 2011

ಯಾರಿಗೂ ಅರ್ಥವಾಗದ ಒಗಟು... ನನ್ನ ಹುಚ್ಚು ಪ್ರೀತಿಯ ಗುಟ್ಟು





















ಖಾಲಿಯಾಗಿವೆ ಪದಗಳು ಬತ್ತಳಿಕೆಯಲ್ಲಿ
ಮಾತೆ ಮೂಡುತ್ತಿಲ್ಲ ನೀರವತೆಯ ಸಂಗದಲ್ಲಿ
ಕೇಳಲು ಏನು ಉಳಿದಿಲ್ಲ..
ಹೇಳಲು ಮೌನದ ಸಮ್ಮತಿಯಿಲ್ಲ

ಸ್ನೇಹ ಸತ್ತು ಬಹಳವೇ ಸಮಯವಾಗಿದೆ
ಇನ್ನು ಸ್ಮಶಾನ ಮೌನ
ಸೂತಕದ ಛಾಯೆ...
ಹೃದಯ ರೋಧನಕ್ಕೆ ಎಲ್ಲಿದೆ ಕೇಳುವ ಕಿವಿ
ಕೇಳಿದ ಕಿವಿಗಳೆಲ್ಲ ಕಿವುಡು
ನೋಡುವ ನೋಟವೆಲ್ಲ ಕುರುಡು

ಇಟ್ಟ ಹೆಜ್ಜೆಯೆಲ್ಲ ಅದೇ ದಾರಿ
ಗುನುಗುವ ಹೃದಯದ ಮಾತುಗಳೇ
ನನ್ನೊಡಲ ಸಂಗಾತಿ
ಮೂಡಿದ ಮನದ ಭಾಷೆಯೇ
ನನ್ನೆದೆಯ ಸಂಗತಿ

ನಿಂತಲ್ಲೇ ಸುಮ್ಮನೆ ನಿಂತೇ
ನನ್ನೊಡನೆ ನನ್ನ ಘನ ಘೋರ ಯುದ್ದ
ನಡೆವಾಗ ಹುಚ್ಚು ರೋಷ
ಗಾಳಿಯೊಡನೆ ಗುದ್ದಾಟ
ಸುಸ್ತಾದಾಗ ಏನೋ ಪೇಚಾಟ
ಸುಮ್ಮನೆ ಕುಳಿತೆ..
ಶೂನ್ಯದೆಡೆಗೆ ನೆಟ್ಟಿದೆ ನೋಟ

ಯಾರಿಗೂ ಅರ್ಥವಾಗದ ಒಗಟು
ನನ್ನ ಹುಚ್ಚು ಪ್ರೀತಿಯ ಗುಟ್ಟು

Monday, September 12, 2011

ನೀ ಬರುವ ದಾರಿ ಇದೆ ಎಂದು
ನಾ  ಕಾಯುತಿರುವೆ  ನಿನಗಾಗೆ  ಇಂದು

ನೀ ಬರುವೆ  ಎಂದು ಹೇಳಿ  ಹೋಗಿ 
ಬಹಳವೇ ಸಮಯವಾಗಿದೆ
ಆಗಿನಿಂದಲೂ ನಿನ್ನ ಕಾಯುವುವಿಕೆಯೇ
ನನ್ನ ಕೆಲಸವಾಗಿದೆ..



Monday, August 29, 2011

ಪ್ರೀತಿಯ ದಾರಿಯೆಲ್ಲ ಒಪ್ಪ ಓರಣ..

ಒಲವಲಿ.. ನಿನ್ನ ಒಲವಲಿ..
ನಾ ನಿನಗೊಲಿದೆನು ನಿನ್ನ  ಒಲವಲಿ..
ಮಾತೊಂದನು  ನೀನಾಡದೆ
ನನ್ನ ಒಪ್ಪಿದೆ ನಿನ್ನ ಕಣ್ಣಂಚಲಿ
ಪೆದ್ದು ಮನಸ ಕದ್ದೆಯಲ್ಲೇ
ಕಣ್ಣೋಟದ ಸಂಚಲಿ..
ನನ್ನಲಿ ನಾನಿಲ್ಲದಾದೆನೆ ಅದೇನೋ ಗಲಿಬಿಲಿ

ಹುಚ್ಚನಾಗಿ  ಅಲೆದೆನು ಅದೆಲ್ಲೋ ಅದೇನೋ ಗುಂಗಲಿ
ಮಾತೆಲ್ಲ ಹಾಡಾಯಿತು ನಿನ್ನ ಮಾತಿನ ಮತ್ತಲ್ಲಿ
ಸುತ್ತಲು ಕತ್ತಲೋ ಬೆಳಕೋ ಯಾವ ಗೊಡವೆ ನನಗಿನ್ನೇಕೆ
ನಾ ಈ ಜಗವನೆ ಗೆದ್ದೇ ನಿನ್ನ ನಗುವ ಮತ್ತಲಿ
ನೀ ಬಳಿ ಇರಲು ಇಲ್ಲೇ ಸ್ವರ್ಗ; ನೀನೆ ನನ್ನ ಬಳುವಳಿ

ನನ್ನಲ್ಲೇ ನೀ ಉಳಿದು ಹೋದೆ.. ಅಬ್ಬಾ... ಎಂಥಹ ಅಚ್ಚರಿ
ಕಣ್ಮುಚ್ಚಿದರೆ ನಿನ್ನದೇ ಒಡನಾಟ..
ಎದ್ದಾಗ. ನೀಬಳಿ ಇರದಿರಲು.. ಏನೋ ಚೂರು ಗಾಬರಿ
ಮತ್ತೆ ಕಣ್ಮುಚ್ಚಲು ಅದೆಷ್ಟು ಸಿಹಿ ಸಂಭ್ರಮ
ನೀನೆ ಮತ್ತೆ ಬಳಿಯಿರಲು ನನ್ನ ಎದುರಲಿ...

ಹೇಳದೆ ಕೇಳದೆ ನಾ ಕಟ್ಟಿರುವೆ  ಮನದ ಬಾಗಿಲಿಗೆ
ನಿನ್ನದೇ ನೆನಪಿನ ತೋರಣ...
ಈ ಪರಿಯ ಹುಚ್ಚಿಗೆ, ಈ ಪರಿಯ ಪ್ರೇಮಕೆ
ಹೇಳು ನೀನೆ ತಾನೇ ಕಾರಣ
ಎದೆಯ ಬಾಗಿಲಲ್ಲೇ ನಾ ಕಾದಿರುವೆ
ಪ್ರೀತಿಯ ದಾರಿಯೆಲ್ಲ ಒಪ್ಪ ಓರಣ..

Wednesday, August 3, 2011

ಹಾಡು ಹಕ್ಕಿ...ಹಾಡು


ಹಾಡು ಹಕ್ಕಿ.. ನೀನು ಹಾಡು ಹಕ್ಕಿ..
ಬೇಡ ನಿಂಗೆ ಯಾವ ಭೀತಿ
ಇರಲಿ ಮನದಲ್ಲಿ ನನಗಾಗೆ ಚೂರು ಪ್ರೀತಿ

ಹಾಡು ಹಕ್ಕಿ ಹಾಡು..
ನನ್ನ ಮನದ ಹಾಡು
ನನ್ನ ನೋವುಗಳನ್ನೆಲ್ಲಾ ಸಾಲು ಸಾಲಾಗಿ ಬರೆದಿಹೆ
ಈಗ ಮನವೆಲ್ಲ ಖಾಲಿ ಖಾಲಿ
ಮನದಣಿಯೆ ಹಾಡು..
ನಾನಿಲ್ಲೇ ನಿನ್ನದೇ ನಿರೀಕ್ಷೆಯಲ್ಲಿ ಕುಳಿತಿರುವೆ ನೋಡು
ಯಾರು ಕೇಳಿದರೆನಂತೆ..? ಕೇಳದಿದ್ದರೆನಂತೆ..?
ನಾನಿರುವೆ ನಿನಗೆ.. ನನಗಾಗಿ ನೀನು..


ಕೂಡಿ ಹಾಡೋಣ..
ಹಾಡಿ ಕುಣಿಯೋಣ...
ನಮಗೇಕೆ ಈ ಲೋಕದ ಚಿಂತೆ
ನಿನ್ನ ನೋವಿಗೆ ದನಿಯಾಗಿರುವೆ ನಾನು
ನನ್ನ ನೋವಿಗೆ ದನಿಯಾಗಿ ನೀನು..
ನಿನ್ನ ದನಿಯಲ್ಲಿ ನೋವೆಲ್ಲಾ ಮರೆತೆ!!!
ನನ್ನ ಬಾಳಿನ ಸಂಜೀವಿನಿ ನೀನು!!!

ಹಾಡು ಹಕ್ಕಿ ಹಾಡು..
ನನ್ನೀ ಜೀವ ತಂಪಾಗಲಿ..
ಕಣ್ಣೇರು ಬತ್ತಿ ಹೋಗಲಿ..
ಮತ್ತೆಂದು ಈ ಹೃದಯ ಚೂರಾಗದಿರಲಿ..
ಹಾಡು ಹಕ್ಕಿ ಹಾಡು...




Wednesday, July 27, 2011

ಸ್ನೇಹವೆಂಬುದು ಎಲ್ಲದಕ್ಕೂ ಮೀರಿದ್ದು...



ಮಾತೆ ಅರ್ಥವಾಗದವನಿಗೆ..
ಮೌನವೇನು ಅರ್ಥವಾದೀತು...?
ಇಷ್ಟು ದಿನದ ಸ್ನೇಹದ ಬೆಲೆ ಮರೆತು ಹೋದವನಿಗೆ
ಚುಚ್ಚು ನುಡಿಗಳ ಗಾಯದ ನೋವೇನು ತಿಳಿದೀತು..

ಬರಿ ತನ್ನ ನೋವೆ ಹಿರಿದೆನ್ನುವವನಿಗೆ
ತಾನು ಇನ್ನೊಬ್ಬರ ನೋಯಿಸಿದ್ದರ ಪರಿವೆ ಎಲ್ಲಿದ್ದೀತು?
ಬೇರೆಯವರ ತಪ್ಪೆ ದೊಡ್ಡದು ಎನ್ನುವವನಿಗೆ
ತನ್ನ ತಪ್ಪಿನ ತಿಳುವಳಿಕೆ ಎಲ್ಲಿದ್ದೀತು?

ಕೋಪದಲ್ಲಿ ಮೂಗನ್ನು ಕೊಯ್ದುಕೊಳ್ಳುವವನಿಗೆ
ತನ್ನ ಕೋಪದಲ್ಲಿ ಪ್ರೀತಿಯೇ ಕಾಣದವನಿಗೆ
ತಾನು ಕಳೆದುಕೊಂಡದ್ದರ ಮೌಲ್ಯವೆಲ್ಲಿ ತಿಳಿದೀತು?

ಕೋಪ ನಮ್ಮನ್ನು ಸುಡುತ್ತದೆ..
ಪ್ರೀತಿ ನೆಮ್ಮದಿ ತರುತ್ತದೆ
ಸ್ನೇಹ ಬಾಳಿಗೆ ಅರ್ಥಕೊಡುತ್ತದೆ

ಪ್ರೀತಿ ಹೆಚ್ಚೋ? ಸ್ನೇಹ ಹೆಚ್ಚೋ?
ಎಂಬ ಹುಚ್ಚು ಕಲ್ಪನೆ ಬೇಡ
ಸ್ನೇಹವೆಂಬುದು ಎಲ್ಲದಕ್ಕೂ ಮೀರಿದ್ದು...

ಸಿಹಿ ಸ್ನೇಹವ ನೆನೆ..
ಕಹಿ ಕೋಪವ ಮರೆ...

Friday, July 1, 2011

ನಿನ್ನ ಭಾವಗಳ ದೋಚಿ ನಾ ಕವಿಯಾದೆ..




ಎಷ್ಟೊಂದು ಕವಿತೆಗಳು ಮೂಡಿವೆ...
ನಿನ್ನದೇ ಸ್ಪೂರ್ತಿಯಲ್ಲಿ...
ನಾ ಪುಟ್ಟ ಕವಯಿತ್ರಿಯಾದೆ..
ನಿನ್ನ ಭಾವಗಳ ಗೀಚುವುದರಲ್ಲಿ..

ಎಲ್ಲರಿಗೂ ಎಷ್ಟೊಂದು ಮೆಚ್ಚುಗೆ ಎಷ್ಟೊಂದು ಅಚ್ಚರಿ
ನನಗಾಗಿ ಒಂದೇ ಪ್ರಶ್ನೆ ಇದ್ಯಾವ ಭಾವ ರೂಪಾಂತರದ ಪರಿ
ನನಗೂ ತಿಳಿದಿಲ್ಲ ಗೆಳೆಯ ನೀನೇ ಉತ್ತರ ಹೇಳು
ಅದೇ ಸರಿ...

ನಿನ್ನ ಚಿತ್ರ ಗೀಚಲೇ?.. ಭಾವ ದೋಚಲೇ?
ಕನಸುಗಳ ಕದಿಯಲೇ? ನೆನಪಿನ ಚಾದರ ನಿನಗೆಂದೇ ಹೆಣೆಯಲೇ?
ಹಾಡಾಗಿ ನಿನ್ನ ಕರೆಯಲೇ?
ತಂಗಾಳಿಯಾಗಿ ನಿನ್ನ ಬಳಿ ಸುಳಿಯಲೇ?

 ಎಷ್ಟು ಬರೆದರೂ ಮುಗಿಯುತ್ತಲೇ ಇಲ್ಲ...
ನೀ ಮೂಡಿಸಿರುವ ಛಾಪು..
ದಿನಕ್ಕೊಂದು ಭಾವಗಳ ಕದಿಯಿತ್ತಿರುವೆ
ದಿನಕ್ಕೊಂದು ರೂಪು..

ನಿನ್ನ ಭಾವಗಳ ದೋಚಿ ನಾ ಕವಿಯಾದೆ..
ನನ್ನ ಹೃದಯವ ದೋಚಿ ನೀ ನನ್ನ ಸಿರಿಯಾದೆ...

                                                             ***ರಂಜನಿ ಎಸ್ ಬಳಿಸಾವಿರ್***