Friday, November 11, 2011

ಭಾವನೆಗಳ ನಾಗಾಲೋಟ...




ಭಾವನೆಗಳ  ನಾಗಾಲೋಟ
ಹುಚ್ಚು  ಕುದುರಯೆಂತೆ ಕೆನೆದಿದೆ
ಛೆ!!! ಇದೇನಿದು ಮನಸ್ಸಿನ ಹುಚ್ಚಾಟ ಹಿಡಿತಕೆ ಸಿಗುತ್ತಿಲ್ಲ..
 ಸುಸ್ತಾದೆ ಯೋಚನಾ ಲಹರಿಯಲಿ ತೇಲಾಡಿ

ಇಬ್ಬಾಗವಾಗಿ ಹೋದೆನು
ಬುದ್ದಿ ಹೇಳುತಿದೆ ಅದ್ಯಾವುದೋ ಸುದ್ದಿ
ಮನಸೇ ನಿನಗೆ ನಾ ಹೇಗೆ ಹೇಳಲಿ ಬುದ್ದಿ
ಸಾಗರದಂಚಲ್ಲಿ ಕಟ್ಟು ಒಂದು ಪ್ರೀತಿಯ ಗುಬ್ಬಿ ಗೂಡು
ಬಂದರೇನಂತೆ ಅಲೆ ಅಬ್ಬರದಿ
ಮತ್ತೆ ಮತ್ತೆ ಕಟ್ಟೋಣ ಬೆಚ್ಚಗಿನ ಗೂಡು
ಹಾಡುತ ನಮ್ಮದೇ ಮನದ ಹಾಡು

ಯಾವ ಹಮ್ಮು ಬಿಮ್ಮಿನ ಚಿಂತೆ ನಮಗೇಕೆ
ಹೃದಯ ಒಡೆದ ಸದ್ದು ಕೂಡ ಕೇಳದಾಗಿದೆ
ನಮ್ಮ ದಾರಿಯಲ್ಲಿ ಅದು ಚೂರು ಚೂರಾಗಿ ಚುಚ್ಚುತಿದ್ದರು
ಮೂಡದಿರಲಿ ಮೊಗದ ಮೇಲೆ ಯಾವುದೇ ನೋವಿನ ನೆರಿಗೆ
ಬೇಡ ಮತ್ತೆ ನಮಗೆಂದು ಯಾವುದೇ ಭಾವುಕತೆಯ ಸುಲಿಗೆ

 ತಂಪು ಗಾಳಿಯು ಕದ್ದೊಯ್ದಿದೆ  ಆ ನನ್ನ ನಿಟ್ಟುಸಿರು
ಬಿಗಿದಪ್ಪಿದೆ ಬೀಸುಗಾಳಿ ಸಾಂತ್ವನ ಹೇಳುತ
ಕೆನ್ನೆಯಿಂದ ಜಾರಿದ ಆ ಕಣ್ಣೀರ ಕೊಂಡೊಯ್ಯಿತು
ಕಾಲ್ತೊಳೆಯಲು ಬಂದ ಅಲೆ ಅಲೆಯು

ಹೊತ್ತು ಕಳೆದರು ಇನ್ನು ಮುಗಿದಿಲ್ಲ
ಭಾವಗಳ ಹುಚ್ಚು ಕುಣಿತ
ಸುಮ್ಮನೆ ಕುಳಿತಿರುವೆ ಮತ್ತೆ ನಾಳೆ ಬಂದೆ ಬರುವೆ
ಇದೆ ಜಾಗ ನನಗಾಗಿ ಕಾದಿರಲಿ
ಸಣ್ಣ ಮೌನ ಗೀತೆ ನನಗಾಗಿ ಅಲೆ ಅಲೆಯಾಗಿ ಮೂಡಿ ಬರಲಿ

                            ***ಸಿರಿ***

Thursday, November 3, 2011

ಯಾರಿಗೂ ಅರ್ಥವಾಗದ ಒಗಟು... ನನ್ನ ಹುಚ್ಚು ಪ್ರೀತಿಯ ಗುಟ್ಟು





















ಖಾಲಿಯಾಗಿವೆ ಪದಗಳು ಬತ್ತಳಿಕೆಯಲ್ಲಿ
ಮಾತೆ ಮೂಡುತ್ತಿಲ್ಲ ನೀರವತೆಯ ಸಂಗದಲ್ಲಿ
ಕೇಳಲು ಏನು ಉಳಿದಿಲ್ಲ..
ಹೇಳಲು ಮೌನದ ಸಮ್ಮತಿಯಿಲ್ಲ

ಸ್ನೇಹ ಸತ್ತು ಬಹಳವೇ ಸಮಯವಾಗಿದೆ
ಇನ್ನು ಸ್ಮಶಾನ ಮೌನ
ಸೂತಕದ ಛಾಯೆ...
ಹೃದಯ ರೋಧನಕ್ಕೆ ಎಲ್ಲಿದೆ ಕೇಳುವ ಕಿವಿ
ಕೇಳಿದ ಕಿವಿಗಳೆಲ್ಲ ಕಿವುಡು
ನೋಡುವ ನೋಟವೆಲ್ಲ ಕುರುಡು

ಇಟ್ಟ ಹೆಜ್ಜೆಯೆಲ್ಲ ಅದೇ ದಾರಿ
ಗುನುಗುವ ಹೃದಯದ ಮಾತುಗಳೇ
ನನ್ನೊಡಲ ಸಂಗಾತಿ
ಮೂಡಿದ ಮನದ ಭಾಷೆಯೇ
ನನ್ನೆದೆಯ ಸಂಗತಿ

ನಿಂತಲ್ಲೇ ಸುಮ್ಮನೆ ನಿಂತೇ
ನನ್ನೊಡನೆ ನನ್ನ ಘನ ಘೋರ ಯುದ್ದ
ನಡೆವಾಗ ಹುಚ್ಚು ರೋಷ
ಗಾಳಿಯೊಡನೆ ಗುದ್ದಾಟ
ಸುಸ್ತಾದಾಗ ಏನೋ ಪೇಚಾಟ
ಸುಮ್ಮನೆ ಕುಳಿತೆ..
ಶೂನ್ಯದೆಡೆಗೆ ನೆಟ್ಟಿದೆ ನೋಟ

ಯಾರಿಗೂ ಅರ್ಥವಾಗದ ಒಗಟು
ನನ್ನ ಹುಚ್ಚು ಪ್ರೀತಿಯ ಗುಟ್ಟು