Wednesday, July 27, 2011

ಸ್ನೇಹವೆಂಬುದು ಎಲ್ಲದಕ್ಕೂ ಮೀರಿದ್ದು...



ಮಾತೆ ಅರ್ಥವಾಗದವನಿಗೆ..
ಮೌನವೇನು ಅರ್ಥವಾದೀತು...?
ಇಷ್ಟು ದಿನದ ಸ್ನೇಹದ ಬೆಲೆ ಮರೆತು ಹೋದವನಿಗೆ
ಚುಚ್ಚು ನುಡಿಗಳ ಗಾಯದ ನೋವೇನು ತಿಳಿದೀತು..

ಬರಿ ತನ್ನ ನೋವೆ ಹಿರಿದೆನ್ನುವವನಿಗೆ
ತಾನು ಇನ್ನೊಬ್ಬರ ನೋಯಿಸಿದ್ದರ ಪರಿವೆ ಎಲ್ಲಿದ್ದೀತು?
ಬೇರೆಯವರ ತಪ್ಪೆ ದೊಡ್ಡದು ಎನ್ನುವವನಿಗೆ
ತನ್ನ ತಪ್ಪಿನ ತಿಳುವಳಿಕೆ ಎಲ್ಲಿದ್ದೀತು?

ಕೋಪದಲ್ಲಿ ಮೂಗನ್ನು ಕೊಯ್ದುಕೊಳ್ಳುವವನಿಗೆ
ತನ್ನ ಕೋಪದಲ್ಲಿ ಪ್ರೀತಿಯೇ ಕಾಣದವನಿಗೆ
ತಾನು ಕಳೆದುಕೊಂಡದ್ದರ ಮೌಲ್ಯವೆಲ್ಲಿ ತಿಳಿದೀತು?

ಕೋಪ ನಮ್ಮನ್ನು ಸುಡುತ್ತದೆ..
ಪ್ರೀತಿ ನೆಮ್ಮದಿ ತರುತ್ತದೆ
ಸ್ನೇಹ ಬಾಳಿಗೆ ಅರ್ಥಕೊಡುತ್ತದೆ

ಪ್ರೀತಿ ಹೆಚ್ಚೋ? ಸ್ನೇಹ ಹೆಚ್ಚೋ?
ಎಂಬ ಹುಚ್ಚು ಕಲ್ಪನೆ ಬೇಡ
ಸ್ನೇಹವೆಂಬುದು ಎಲ್ಲದಕ್ಕೂ ಮೀರಿದ್ದು...

ಸಿಹಿ ಸ್ನೇಹವ ನೆನೆ..
ಕಹಿ ಕೋಪವ ಮರೆ...

Friday, July 1, 2011

ನಿನ್ನ ಭಾವಗಳ ದೋಚಿ ನಾ ಕವಿಯಾದೆ..




ಎಷ್ಟೊಂದು ಕವಿತೆಗಳು ಮೂಡಿವೆ...
ನಿನ್ನದೇ ಸ್ಪೂರ್ತಿಯಲ್ಲಿ...
ನಾ ಪುಟ್ಟ ಕವಯಿತ್ರಿಯಾದೆ..
ನಿನ್ನ ಭಾವಗಳ ಗೀಚುವುದರಲ್ಲಿ..

ಎಲ್ಲರಿಗೂ ಎಷ್ಟೊಂದು ಮೆಚ್ಚುಗೆ ಎಷ್ಟೊಂದು ಅಚ್ಚರಿ
ನನಗಾಗಿ ಒಂದೇ ಪ್ರಶ್ನೆ ಇದ್ಯಾವ ಭಾವ ರೂಪಾಂತರದ ಪರಿ
ನನಗೂ ತಿಳಿದಿಲ್ಲ ಗೆಳೆಯ ನೀನೇ ಉತ್ತರ ಹೇಳು
ಅದೇ ಸರಿ...

ನಿನ್ನ ಚಿತ್ರ ಗೀಚಲೇ?.. ಭಾವ ದೋಚಲೇ?
ಕನಸುಗಳ ಕದಿಯಲೇ? ನೆನಪಿನ ಚಾದರ ನಿನಗೆಂದೇ ಹೆಣೆಯಲೇ?
ಹಾಡಾಗಿ ನಿನ್ನ ಕರೆಯಲೇ?
ತಂಗಾಳಿಯಾಗಿ ನಿನ್ನ ಬಳಿ ಸುಳಿಯಲೇ?

 ಎಷ್ಟು ಬರೆದರೂ ಮುಗಿಯುತ್ತಲೇ ಇಲ್ಲ...
ನೀ ಮೂಡಿಸಿರುವ ಛಾಪು..
ದಿನಕ್ಕೊಂದು ಭಾವಗಳ ಕದಿಯಿತ್ತಿರುವೆ
ದಿನಕ್ಕೊಂದು ರೂಪು..

ನಿನ್ನ ಭಾವಗಳ ದೋಚಿ ನಾ ಕವಿಯಾದೆ..
ನನ್ನ ಹೃದಯವ ದೋಚಿ ನೀ ನನ್ನ ಸಿರಿಯಾದೆ...

                                                             ***ರಂಜನಿ ಎಸ್ ಬಳಿಸಾವಿರ್***