Friday, April 29, 2011

ನೀರವತೆ...


ಒಂಟಿತನ ಎಂಬುದು ಜನಜಂಗುಳಿಯಲ್ಲೂ  ಕಾಡುವ ಆ ನಿನ್ನ ನೆನಪು,
ನಿನ್ನ ಜೊತೆಯಿಲ್ಲದ  ನಾನು,
ನಾನಿಲ್ಲದ ನೀನು,
ಸುಮ್ಮನೆ ಒಬ್ಬಳೇ ಕುಳಿತು ಕಣ್ಣೀರಾಗುವ ಆ ಕ್ಷಣ,
ಮಾತೆ ಬರದ ಆ ಹೊತ್ತಿನ ಮೌನ,
ಕಾರಣವಿಲ್ಲದೆ  ಮೂಡುವ ಆ ಹುಚ್ಚು ನಗೆ
ಗುರಿಯೇ ಇಲ್ಲದ ಆ ನಡೆ
ಮಾಸಿದ ನಗು ಹೊತ್ತ ಆ ಪೇಲವ ಮುಖ
ಎಲ್ಲರದು ಒಂದೇ ಪ್ರಶ್ನೆ...
ಸ್ಪೂರ್ತಿಯ ಚಿಲುಮೆ ಯಾಕೆ ಬರಿದಾಯ್ತು
ಹೂವಿನಂತ ನಗೆ ಎಲ್ಲಿ ಕಳೆದುಹೋಯ್ತು
ಉತ್ತರ ನಿನಗಲ್ಲದೆ ಯಾರಿಗೆ ತಿಳಿದಿರುತ್ತದೆ
ನೀನೆ ಒಮ್ಮೆ ಬಂದು ಹೇಳಿ ಬಿಡು
ಒಂದೇ ಒಂದು ಸಲ ನಿನ್ನ ನೋಡಬೇಕಿದೆ
ಕರುಣೆ ತೋರಿ ಬಂದು ಬಿಡು.. 

ಯಾರದು....

ನಾನೇ ನಿನ್ನ ಹೃದಯದ ರಾಣಿ ಅಂತ ಎಣಿಸಿದ್ದೆ,
ನಿನ್ನ ಹೃದಯದ ಪುಟ್ಟ ಗೂಡಲ್ಲಿ ನಾನೊಬ್ಬಳೆ ಮೆರೆದಿದ್ದೆ,
ಯಾರಿಗೆ ತಿಳಿದಿತ್ತು ನಿನ್ನ ಲೆಕ್ಕಾಚಾರ
ಅದ್ಯಾರದೋ ಹಸಿ ಹೆಜ್ಜೆ ಗುರುತು ಕಾಣಿಸುತಿದೆ
ನಿನ್ನ ಹೃದಯದಲ್ಲಿ ಮತ್ತೆ ಯಾರದೋ ಪಿಸುದನಿ ಕೇಳಿಸಿದೆ
ಯಾರೋ ನಿನ್ನ ಮನದ ಬಾಗಿಲ ತಟ್ಟಿ-
-ಒಳ ಬಂದುದು ನಿಚ್ಚಳವಾಗಿ ಕೇಳಿಸಿದೆ...
ಮನಸ್ಸು ಮೂಕವಾಗಿ ರೋದಿಸಿದೆ-
-ನನ್ನ ಜಾಗದಲ್ಲಿ ಬೇರೊಬ್ಬರ ಕಂಡು..
ಮತ್ತೆ ಅದೇ ಮೌನ...ಅದೇ ನಾನು.. ಅದೇ ಬೇಸರ..
ಬರಿ ನಾನು.......

Thursday, April 28, 2011

ನಿನ್ನದೇ ನಿರೀಕ್ಷೆಯಲ್ಲಿ......

 
ನಿನ್ನ ಮನದ ಕೋಣೆಯಲ್ಲಿ ಕೂತಿರುವೆ,
ನಿನ್ನ ಹನಿ ಪ್ರೀತಿಗಾಗೆ,
ನಿನ್ನ ಪ್ರೀತಿಯ ಹಂಬಲದಿ,
ಯಾಕೆ ಈ ನಿರ್ಲಿಪ್ತ ಭಾವ,
ಕಣ್ಣು ಹನಿಗೂಡಿವೆ,
ನಿಲ್ಲುತ್ತಿಲ್ಲ ಬಿಕ್ಕಳಿಕೆ,
ಉಸಿರಂತು ಏರುಪೇರು,
ನಗುವಂತು ಮರೆತೆಹೋಗಿದೆ,
ನಿನ್ನೊಡನೆ ನಕ್ಕ ಆ ನಗುವೇ ಕೊನೆಯದು,
ನೀನು ನನ್ನ ತೊರೆದುಹೋದಲ್ಲೇ ಮೊಂಡು ಹಟದಿ ಕುಳಿತಿರುವೆ,
ನೀನೆ ಬಂದು ಸಂತೈಸುವೆಯೆಂದು,
ಹೆಚ್ಚೇನು ಬೇಡುತ್ತಿಲ್ಲ  ನಿನ್ನಿಂದ ನಾನು,
ಚೂರು ಪ್ರೀತಿ,
ಚೂರೇ ಚೂರು ಕಾಳಜಿ ಅಷ್ಟೇ,
ನಿನ್ನ ಆಸರೆಗಾಗೆ ಕಾದಿರುವೆ ಕೈ ಹಿಡಿದು ಕಾಪಾಡು,
ನಾನು ನಿನ್ನ ಕಣ್ಣುಗಳಿಂದ ಕಣ್ಣೀರಾಗಿ ಕರಗಿ,
ಮಣ್ಣಲ್ಲಿ ಮಣ್ಣಾಗುವ ಮುನ್ನ,
ನಿನ್ನ ನಿಟ್ಟುಸಿರುತಾಗಿ ನಾ ಬಾಡಿ ಹೋಗುವ ಮುನ್ನ...
                                                  ನಿನ್ನದೇ ನಿರೀಕ್ಷೆಯಲ್ಲಿ......
                                                     
***ರಂಜನಿ ಎಸ್ ಬಳಿಸಾವಿರ್ ***

Thursday, April 14, 2011

ಹೋಗೋಣವೆ ಸಣ್ಣ ವನವಾಸಕ್ಕೆ..

ಬಾ ಹೋಗೋಣ ಸಣ್ಣ ವನವಾಸಕ್ಕೆ,
ಸ್ವಲ್ಪ ದೂರ ಮಾತು... ಸ್ವಲ್ಪ ದೂರ ಮೌನ,
ಅಲ್ಲಿ ಬರಿ ನಾನು.. ಮತ್ತೆ ನೀನು...
ಹಕ್ಕಿಗಳ ಹಾಡು..ನಮ್ಮ ಪ್ರೀತಿಯ ಜಾಡು,
ಹಸಿರ ಹಾಸು... ಹೂವಿನಂಥ ನಮ್ಮ ಮನಸ್ಸು..
ಹಿತವಾದ ಸುಳಿ ಗಾಳಿ.. ಎಲ್ಲೆಡೆ ನಮ್ಮ ಪ್ರೀತಿಯ ಘಮ..
ಕೈಹಿಡಿದು ನಡೆದಾಗ ಸಪ್ತವರ್ಣದ ಕನಸು..
ಆಹಾ.. ಅದೇಕೋ ಆ ಸೂರ್ಯನಿಗೆ ನಮ್ಮಲ್ಲಿ ಹುಸಿ ಮುನಿಸು..
ಹಸಿರು ಲೋಕದಲ್ಲಿ ಹಿತವಾದ ತಂಪು ಮೌನ..
ಆಗಾಗ ನಮ್ಮ ಪಿಸುಮಾತಿನ, ನಗುವಿನ ಸಂಚಲನ..
ಎಷ್ಟು ಸೊಗಸು ವನರಾಶಿಯ ಸವಿ..
ಸವಿದಷ್ಟು ಮುಗಿಯದ ಪ್ರೀತಿಯ ಸಿರಿಯ ಅಕ್ಷಯ ಪಾತ್ರೆ..
ನಡೆದದೆಷ್ಟೋ.. ಆಡಿದ ಮಾತುಗಲೆಷ್ಟೋ..ಮೌನದ ಹಾಡೆಷ್ಟೋ
ಸೂರ್ಯ ಕೂಡ ಬೇಸರಿಸಿ ಮನೆಯ ಹಾದಿ ಹಿಡಿದಿರುವ,
ಮತ್ತೆ ನಮ್ಮನ್ನು ನಾಳೆ ನೋಡುವ ಕಾತರದಲ್ಲಿರುವ..
ಬಾ ಹೊತ್ತು ಸರಿದರೇನಂತೆ..ನಾಳೆ ಮತ್ತೆ ಜೊತೆಯಾಗುವ..
ಮತ್ತೆ ಹೊಸ ಹಾದಿ ಹಿಡಿಯುವ..  

Tuesday, April 12, 2011

ಮನದ ಮುಗಿಲಲ್ಲಿ ಮಳೆ

ಅದೇನೋ ಬೇಸರ..
ಅದ್ಯಾವುದೋ ನೆನಪು..
ಕದಡಿದೆ ಮನದ ಮುಗಿಲು..
ಕಾಮನ ಬಿಲ್ಲಿನ ಬದಲು..
ಹಠ ಹಿಡಿದ ಮಗುವಂತೆ ಒಂದೇ ಸಮನೆ ಸೋನೆ ಮಳೆ..
ಆಗೊಮ್ಮೆ ಈಗೊಮ್ಮೆ ನೋವಿನ ಗುಡುಗು..
ಮನದ ಮೂಲೆಯಲೆಲ್ಲೋ ಸಿಡಿಲು ಬಡಿದ ಅನುಭವ
ಜೋರಾಗೆ ಬೀಸಿದೆ ನೆನಪುಗಳ ಹುಚ್ಚು ಗಾಳಿ..
ಕೆಲವೊಮ್ಮೆ ಮಧ್ಯದಲ್ಲಿ ಆ ಸೂರ್ಯನ ಇಣುಕು ನೋಟ..
ಮತ್ತೊಮ್ಮೆ ಅಗುಲಿವಿಕೆಯ ಚಳಿ..
ಮಗದೊಮ್ಮೆ ಅಪ್ಪುಗೆಯ ಬೆಚ್ಚಗಿನ ಭಾವ..
ಇಂದೇಕೋ ಮನದಲ್ಲಿ ಶುರುವಾಗಿದೆ ಮತ್ತೊಮ್ಮೆ ಮುಂಗಾರು ಮಳೆ...